ಪ್ರಮೀಳೆ	
ಸ್ತ್ರೀರಾಜ್ಯದ ರಾಣಿ. ತನ್ನ ರಾಜ್ಯದಲ್ಲಿ ಕಾಲಿಟ್ಟ ಧರ್ಮರಾಜನ ಯಜ್ಞಾಶ್ವ ಕಟ್ಟಿಸಿದಳು. ಮದನಾರಿಯಾದ ಮಹೇಶ್ವರನ ಸಂಗಡ ಯುದ್ಧ ಮಾಡಿದ ಅರ್ಜುನನಿಗೆ ನಾರಿಯ ಮೇಲೆ ಯುದ್ಧ ಮಾಡಲು ಮನಸ್ಸು ಬರಲಿಲ್ಲ. ಪ್ರಮೀಳೆ ತನ್ನನ್ನು ಲಗ್ನವಾಗಬೇಕು ಇಲ್ಲವೆ ತನ್ನೊಡನೆ ಯುದ್ಧಮಾಡಿ ಗೆಲ್ಲಬೇಕು ಎಂದು ಸವಾಲುಹಾಕಿ ಬಾಣಗಳ ಮಳೆ ಸುರಿಸಿದಳು. ಅರ್ಜುನ ವಿಧಿಯಿಲ್ಲದೆ ಅವಳೊಡನೆ ಯುದ್ಧ ಮಾಡಲೇಬೇಕಾಯಿತು. ಅವನ ಸಾಮಾನ್ಯ ಬಾಣಗಳಿಗೆ ಪ್ರಮೀಳೆ ಸೋಲಲಿಲ್ಲ. ಆಗ ಅರ್ಜುನ ಸಮ್ಮೋಹನಾಸ್ತ್ರವನ್ನು ಪ್ರಯೋಗಿಸಿದ. ಪ್ರಮೀಳೆ ನಸುನಗೆಯಿಂದ ಆ ಬಾಣವನ್ನು ಕಡಿದು ಮತ್ತೊಂದು ಬಾಣದಿಂದ ಕಿರೀಟಿಯನ್ನು ನೋಯಿಸಿದಳು. ಅರ್ಜುನ ಮತ್ತೊಂದು ದಿವ್ಯವಾದ ಬಾಣವನ್ನು ಹೂಡಿ ಹೊಡೆಯಲಿಕ್ಕೆ ಸಿದ್ಧನಾದ. ಆ ಸಮಯಕ್ಕೆ ಅಶರೀರವಾಣಿಯೊಂದು ಪ್ರಮೀಳೆ ಅಜೇಯಳಾದ್ದರಿಂದ ಯುದ್ಧವನ್ನು ಕೈಬಿಟ್ಟು ಆಕೆಯನ್ನು ವರಿಸು. ಇದರಿಂದ ಮುಂದೆ ಕಲ್ಯಾಣವಾಗುವುದು ಎಂದು ನುಡಿಯಿತು. ಆಗ ಅರ್ಜುನ ಪ್ರಮೀಳೆಗೆ ತನ್ನ ಅಣ್ಣನಾದ ಧರ್ಮರಾಜ ಹಸ್ತಿನಾವತಿಯಲ್ಲಿ ಯಜ್ಞದೀಕ್ಷಿತನಾಗಿರುವುದರಿಂದ ತಾನು ಯಾಗ ಮುಗಿಯುವವರೆಗೆ ವ್ರತಸ್ಥನಾಗಿದ್ದು ಸ್ತ್ರೀ ಸಮಾಗಮವನ್ನು ಮಾಡುವುದಿಲ್ಲವೆಂದು ತಿಳಿಸಿ, ಯಜ್ಞವನ್ನು ವೀಕ್ಷಿಸಲು ಆಕೆಯನ್ನು ಆಹ್ವಾನಿಸಿ, ಯಜ್ಞಾನಂತರ ಅವಳನ್ನು ಮದುವೆಯಾಗುವುದಾಗಿ ಮಾತುಕೊಟ್ಟ. ಆಗ ಪ್ರಮೀಳೆ ಅರ್ಜುನನ ಮಾತಿಗೆ ಒಡಂಬಟ್ಟು ತನ್ನ ಮನೆಯಲ್ಲಿ ಕಟ್ಟಿದ್ದ ಕುದುರೆಯನ್ನು ಬಿಟ್ಟುಕೊಟ್ಟು ತನ್ನ ಭಂಡಾರದಲ್ಲಿಯೂ ಮನೆಯಲ್ಲಿಯೂ ಇದ್ದ ಅಮೂಲ್ಯವಾದ ವಸ್ತುಗಳನ್ನೆಲ್ಲ ತರಿಸಿಕೊಟ್ಟು ತನ್ನ ಎಲ್ಲ ನಾರೀ ಸೈನ್ಯದೊಂದಿಗೆ ಹಸ್ತಿನಾವತಿಗೆ ಹೋದಳು. ಯಾಗವೆಲ್ಲ ಸಂಪೂರ್ಣವಾಗಿ ಮುಗಿದ ಮೇಲೆ ಅರ್ಜುನ ಆಕೆಯನ್ನು ವರಿಸಿದ.	
(ಕೆ.ವೈ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ